ಮೂಡಿಗೆರೆ : ಕೇಂದ್ರ ಸರ್ಕಾರದ ಜನವಿರೋಧಿ ನೀತಿ, ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೆರವಣಿಗೆ ಹಾಗೂ ಪ್ರತಿಭಟನೆಯನ್ನು ನಡೆಸಲಾಯಿತು.
ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಛೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ತಾಲ್ಲೂಕು ಕಛೇರಿಗೆ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ತಹಶೀಲ್ದಾರರಿಗೆ ನೀಡಿದರು. ಕೇಂದ್ರ ಸರ್ಕಾರವು ಹಿಂದಿನ ಆರು ವರ್ಷಗಳಿಂದ ಪ್ರತೀ ತಿಂಗಳು ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಹೆಚ್ಚಿಸುತ್ತಾ ಬಂದಿರುತ್ತದೆ. ದೇಶದ ಪ್ರತಿಯೊಬ್ಬ ನಾಗರೀಕನು ತಮ್ಮ ದಿನನಿತ್ಯದ ಜೀವನಕ್ಕಾಗಿ ಅಡುಗೆ ಅನಿಲವನ್ನು ಬಳಸುತ್ತಿದ್ದಾನೆ. ಇಂಥಹ ಅಗತ್ಯ ವಸ್ತುಗಳ ಬೆಲೆ ಏರಿಕೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಹಿಡಿತದಲ್ಲಿ ಇರಸಬೇಕಾಗಿರುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಆದರೆ ಕೇಂದ್ರ ಸರ್ಕಾರವು ತನ್ನ ಜವಬಾರಿಯಿಂದ ನುಣುಚಿಕೊಳ್ಳುತ್ತಿರುವುದು ಖಂಡನೀಯ. ಪ್ರಧಾನ ಮಂತ್ರಿ ಉಜ್ವಲ ಯೋಜನಾ ಫಲಾನುಭವಿಗಳು ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದು, ಸಿಲಿಂಡರ್ ತುಂಬಿಕೊಳ್ಳಲು ಯೋಚನೆ ಮಾಡುವಂತಾಗಿದೆ.
ಇತ್ತ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೆಟ್ರೊಲಿಯಂ ಕಂಪೆನಿಗಳು ಮನಸ್ಸಿಗೆ ತೋಚಿದಂತೆ ಬೆಲೆ ಏರಿಕೆ ಮಾಡುತ್ತಿರುವುದು ಕೇಂದ್ರ ಸರ್ಕಾರದ ಹಿಡಿತದಲ್ಲಿ ಇಲ್ಲವೆಂಬಂತೆ ಬಾಸವಾಗುತ್ತಿದೆ. ಆದುದುರಿಂದ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಸೂಕ್ತ ರೀತಿಯಲ್ಲಿ ಕಾನೂನು ರೂಪಿಸಲು ಸರ್ಕಾರಿ ಸ್ವಾಮ್ಯದ ಕಂಪೆನಿಗಳನ್ನು ನಿಯಂತ್ರಣದಲ್ಲಿಡಲು ಹಾಗೂ ಅಡುಗೆ ಅನಿಲ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಯಿತು.
ಪ್ರತಿಭಟನೆಯಲ್ಲಿ ಜಿ.ಪಂ.ಪ್ರಧಾನ ಕಾರ್ಯದರ್ಶಿ ಕೆ.ಮೊಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ ಸುರೇಂದ್ರ, ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ಹಿರಿಯ ಮುಖಂಡ ಬಿ.ಎಸ್.ಜಯರಾಂ, ಪ್ರಧಾನ ಕಾರ್ಯದರ್ಶಿ ಮುಗ್ರಹಳ್ಳಿ ಸಂಪತ್, ಮಾಜಿ ತಾ.ಪಂ.ಅಧ್ಯಕ್ಷ ಎ.ಜಿ.ಸುಬ್ರಹ್ಮಣ್ಯ, ಕುಮಾರ್ ರಾಜ್ ಅರಸ್, ಹೆಚ್.ಎಸ್.ಸುಧೀರ್, ಸಬ್ಬೇನಹಳ್ಳಿ ಹರೀಶ್. ಪ.ಪಂ.ಸದಸ್ಯರಾದ ಎಂ.ಸಿ.ಹೂವಪ್ಪ , ಹಂಜಾ, ಪ್ರಧಾನ ಕಾರ್ಯದರ್ಶಿ ಬೆಟ್ಟಗೆರೆ ಮನೋಜ್, ಅಕ್ರಂ ಹಾಜಿ, ಟಿ.ಎಂ.ಸುಬ್ರಹ್ಮಣ್ಯ, ಟಿ.ಕಮಲಾಕ್ಷಿ, ಜಯಮ್ಮ, ಎಮ.ಎಲ್ ಅಭಿಜಿತ್ ಸೇರಿದಂತೆ ಹಲವು ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.










