ಬೆಂಗಳೂರು :ನಟ ದುನಿಯಾ ವಿಜಯ್ ಅವರ ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಪತ್ನಿ ಕೀರ್ತಿಗೌಡ ಹಾಗೂ ಅವರ ತಂದೆ, ತಾಯಿಯೊಂದಿಗೆ ದುನಿಯಾ ವಿಜಯ್ ಅವರು ಇಂದು ಬೆಳಗ್ಗೆ ಡಿಸಿಪಿ ಅಣ್ಣಾಮಲೈ ಅವರ ಕಚೇರಿಗೆ ತೆರಳಿದ್ದರು. ಈ ವೇಳೆ ನಾಗರತ್ನ ಅವರು ಗೈರಾಗಿದ್ದರು. ವಿಜಯ್ ಹಾಗೂ ಅವರ ಕುಟುಂಬಸ್ಥರನ್ನ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈಅವರು ವಿಚಾರಣೆ ನಡೆಸಿದ್ದು, ಈ ವೇಳೆ ಡಿಸಿಪಿ ಅಣ್ಣಾಮಲೈ ಅವರು ವಿಜಯ್‍ಗೆ ಶಾಂತಿ ಕದಡುವ ಕೆಲಸ ಮಾಡಬಾರದು. ಕಾನೂನಿಗಾಗಲಿ ಹಾಗೂ ಸಾರ್ವಜನಿಕರಿಗಾಗಲಿ ಧಕ್ಕೆ ತರುವಂತಹ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.